ಭಗೀರಥ ಮತ್ತು ಅವನ ಪೂರ್ವಜರ ಅದೆಷ್ಟು ಪರಿಶ್ರಮದ ಫಲ ಗಂಗೆ ಭೂಮಿಗೆ ಹರಿದಳು, ಭಾಗಿರಥಿಯಾದಳು. ಭೂಮಿಗೆ ಬರುವ ಮೊದಲೇ ಗಂಗೆ ಬ್ರಹ್ಮನಲ್ಲಿ ಮಾಡಿದ್ದ ಮನವಿ ಸತ್ಯವಾದದ್ದೆ ಎಂದು ಈಗ ಸಾಬೀತಾಗಿದೆ. ಭೂಲೋಕ ಬರೀ ಕೆಟ್ಟ ಮನಸ್ಸಿನ ಜನ, ಕೊಳಕು ಸ್ಥಿತಿ ತುಂಬಿದೆ, ನಾನು ಹೋಗಬೇಕಾದದ್ದು ಅನಿವಾರ್ಯವೇ ಎಂಬ ಮನವಿ ಇಟ್ಟಿದ್ದಳು ಗಂಗಾಮಾತೆ. ಆ ತಾಯಿ ಎಷ್ಟೋ ಪ್ರಯತ್ನಗಳ ಫಲವಾಗಿ (ಅದೂ ನಮ್ಮ ಪ್ರಯತ್ನ ಅಲ್ಲವೇ ಅಲ್ಲ!!!) ಇಳಿದು ಬಂದಿದ್ದೆ ನಮ್ಮ ಪುಣ್ಯವಾಗಿದೆ. ಭಗೀರಥನ ಪ್ರಯತ್ನದಿಂದ ಅವನಿಗಷ್ಟೇ ಅಲ್ಲದೆ ನಮಗೆಲ್ಲರಿಗೂ ಆ ಮಾತೆಯ ದರ್ಶನವಾಗಿದೆ.
ಜನಗಳಿಗೆ ಅದರ ಹಿಂದಿನ ಕಷ್ಟಗಳು ,ಯಾರದೋ ಪರಿಶ್ರಮ ಯಾವುದು ಬೇಕಾಗಿಲ್ಲ.ತನ್ನ ಕೈಗೆ ಸಿಕ್ಕಿದ ವಸ್ತು, ಅದರ ಬೆಲೆಯ ಅರಿವೂ ಇಲ್ಲದೆ ದುರುಪಯೋಗ ಪಡಿಸೋ ಯೋಚನೆಗಳೇ ಜಾಸ್ತಿ. ಗಂಗೆಯ ಮೂಲ ಹರಿವನ್ನೇ ಬದಲಿಸುವತ್ತ ಹೊರಟಿದೆ ಈಗಿನ ಜನರ ಮನಸ್ಥಿತಿ, Dam ಕಟ್ಟಿ ಅದರ ಸ್ವತಂತ್ರ ಹರಿವಿಗೆ ಅಡ್ಡಿ ಪಡಿಸಿ ಮಾನವನಿಗೆ ಇಷ್ಟ ಬಂದ ದಾರಿಯಲ್ಲಿ ಬಲವಂತದಿಂದ ಪಥ ಬದಲಿಸೋ ಯೋಚನೆ ದುರಾದೃಷ್ಟಕರ. ಅವಳು ಪಾಪನಾಶಿನಿ. ಅಂತ ಜೀವನದಿಯನ್ನೇ ಮಲಿನ ಪಡಿಸಿ ಮಂಗನ ಕೈಯಲ್ಲಿ ಮಾಣಿಕ್ಯ ಕೊಟ್ಟ ರೀತಿ ಎನ್ನೋ ಗಾದೆಯನ್ನ ಅಕ್ಷರಶಃ ಪಾಲಿಸಿದೆ ಜನಾಂಗ..!!!
ಗಂಗೆ ಸ್ವತಂತ್ರಳಾಗಬೇಕು.ಅವಳು ಅಳೋದನ್ನ ನೋಡಿಕೊಂಡು ಇದ್ದುಬಿಟ್ಟಿದ್ದು ಸಾಕೇ ಸಾಕು. ತ್ರಿಪಥಗಾಮಿನಿ ಆದ ಆ ನದಿ ತನ್ನ ಇಷ್ಟದ ರೀತಿಯಲ್ಲೇ ಹರಿಯಲಿ. ಅದುಬಿಟ್ಟು ಬಲವಂತದ ಮುಖೇನ ಮಾನವನ ಪೌರುಷ ತಾಂಡವ ಆಡಿದರೆ ವಿಕೋಪಗಳು ತಲೆದೊರೋದು ಸಹಜ. ಮಾನವ ಎಷ್ಟೇ ಬೃಹತ್ ಆಗಿ ಬೆಳೆದರೂ, ಗಂಗೆ ಮುನಿಸಿಕೊಂಡರೆ ಅವಳ ಮುಂದೆ ತಾನು ಸೋತು ನೆಲಸಮವಾಗಲು ಕ್ಷಣ ಮಾತ್ರವೇ ಸಾಕು. ಇನ್ನಾದರೂ ಪ್ರಕೃತಿಯ ಎಚ್ಚರಿಕೆಗಳನ್ನು ಅರ್ಥ ಮಾಡಿಕೊಂಡು ಜನತೆ ತಮ್ಮ ಮನಸ್ಸನ್ನು ಶುದ್ಧಗೊಳಿಸಿ ಮುನ್ನಡೆಯಬೇಕಾಗಿದೆ. ಮಕ್ಕಳೇ ಮುಳುವಾದರೆ ಅಮ್ಮನಿಗೆ ಆಸರೆ ಇನ್ನ್ಯಾರು? . ಬುದ್ಧಿಜೀವಿಗಳೇ ಯೋಚಿಸಿ, ಎಲ್ಲಾ ಒಟ್ಟಾಗಿ ಗಂಗೆಯ ಉಳಿವಿಗಾಗಿ ಜತೆಯಾಗೋಣ.